ಆಮೋಚನ ಮಗನಾದ ಯೆಶಾಯನಿಗೆ ಆದ ದೈವದರ್ಶನ. ಯೆಹೂದ ಮತ್ತು ಜೆರುಸಲೇಮಿನಲ್ಲಿ ನಡೆಯಲಿದ್ದ ಘಟನೆಗಳ ಬಗ್ಗೆ ದೇವರು ಯೆಶಾಯನಿಗೆ ಈ ದರ್ಶನ ನೀಡಿದನು; ಯೆಹೂದದ ಅರಸರಾದ ಉಜ್ಜೀಯ, ಯೋಥಾವು, ಆಹಾಜ ಮತ್ತು ಹಿಜ್ಕೀಯರ ಕಾಲದಲ್ಲಿ ಯೆಶಾಯನಿಗೆ ಈ ದರ್ಶನವಾಯಿತು.
ಇಸ್ರೇಲ್ ದೇಶವು ಪಾಪದಿಂದ ತುಂಬಿಹೋಗಿದೆ; ಅವರ ಪಾಪವೇ ಅವರಿಗೆ ಭಾರವಾದ ಹೊರೆಯಾಗಿದೆ; ಅವರು ದುಷ್ಟಕುಟುಂಬಗಳ ಕೆಟ್ಟಮಕ್ಕಳಂತಿದ್ದಾರೆ. ಅವರು ಯೆಹೋವನನ್ನು ತ್ಯಜಿಸಿದ್ದಾರೆ; ಇಸ್ರೇಲಿನ ಪರಿಶುದ್ಧ ದೇವರನ್ನು ಅವಮಾನಪಡಿಸಿದ್ದಾರೆ; ಅವರು ಆತನನ್ನು ತೊರೆದು ಅಪರಿಚಿತನೋ ಎಂಬಂತೆ ಪರಿಗಣಿಸಿದ್ದಾರೆ.
ನಾನು ನಿಮ್ಮನ್ನು ಯಾಕೆ ಶಿಕ್ಷಿಸುತ್ತಲೇ ಇರಬೇಕು? ನಾನು ನಿಮ್ಮನ್ನು ಶಿಕ್ಷಿಸಿದೆನು, ಆದರೆ ನೀವು ಬದಲಾಗಲಿಲ್ಲ. ನೀವು ನನಗೆ ವಿರುದ್ಧವಾಗಿ ಏಳುತ್ತಲೇ ಇದ್ದೀರಿ. ಈಗ ಪ್ರತಿಯೊಂದು ತಲೆಯೂ ಪ್ರತಿಯೊಂದು ಹೃದಯವೂ ರೋಗಕ್ಕೆ ಬಲಿಯಾಗಿದೆ.
ನಿಮ್ಮ ಅಂಗಾಲಿನಿಂದ ಹಿಡಿದು ನಡುನೆತ್ತಿಯವರೆಗೂ ನಿಮ್ಮ ದೇಹದಲ್ಲೆಲ್ಲಾ ಗಾಯಗಳೂ ಬಾಸುಂಡೆಗಳೂ ಹುಣ್ಣುಗಳೂ ತುಂಬಿಕೊಂಡಿವೆ. ಆದರೆ ಆ ಹುಣ್ಣುಗಳಿಗೆ ನೀವು ಸರಿಯಾಗಿ ಚಿಕಿತ್ಸೆ ಕೊಡಲಿಲ್ಲ; ಅವುಗಳನ್ನು ಒರೆಸಲಿಲ್ಲ, ಕಟ್ಟಲಿಲ್ಲ.
ನಿಮ್ಮ ದೇಶವು ಹಾಳಾಗಿದೆ; ನಿಮ್ಮ ನಗರಗಳು ಬೆಂಕಿಯಿಂದ ಸುಡಲ್ಪಟ್ಟಿವೆ. ನಿಮ್ಮ ಶತ್ರುಗಳು ನಿಮ್ಮ ದೇಶವನ್ನು ವಶಪಡಿಸಿಕೊಂಡಿದ್ದಾರೆ; ಅನ್ಯದೇಶವು ಶತ್ರುಸೈನ್ಯದಿಂದ ಹಾಳಾಗುವಂತೆಯೇ, ನಿಮ್ಮ ದೇಶವೂ ಹಾಳಾಗಿದೆ.
ಆದರೆ ಸರ್ವಶಕ್ತನಾದ ಯೆಹೋವನು ಸ್ವಲ್ಪ ಮಂದಿಯನ್ನಾದರೂ ಉಳಿಸಿ ಅಲ್ಲಿ ವಾಸಿಸುವಂತೆ ಮಾಡಿದ್ದಾನೆ. ನಾವು ಸೊದೋಮ್ ಗೊಮೋರ ಪಟ್ಟಣಗಳಂತೆ ಸಂಪೂರ್ಣವಾಗಿ ನಾಶವಾಗಲಿಲ್ಲ. ದೇವರ ಅಪೇಕ್ಷೆ — ಯಥಾರ್ಥವಾದ ಸೇವೆ
ಯೆಹೋವನು ಹೇಳುವುದೇನೆಂದರೆ, “ಈ ಯಜ್ಞಗಳನ್ನೆಲ್ಲ ನೀವು ನನಗೆ ಕೊಡುತ್ತಲೇ ಇರುವುದೇಕೆ? ನಿಮ್ಮ ಆಡುಗಳ ಯಜ್ಞಗಳೂ, ಹೋರಿಗಳ, ಕುರಿಗಳ, ಆಡುಗಳ ಕೊಬ್ಬೂ ನನಗೆ ಬೇಕಿಲ್ಲ. ಅವುಗಳ ರಕ್ತಕ್ಕೆ ನಾನು ಪ್ರಸನ್ನನಾಗುವುದಿಲ್ಲ.
“ನಿಮ್ಮ ಅಯೋಗ್ಯವಾದ ಯಜ್ಞಗಳನ್ನು ನನ್ನ ಬಳಿಗೆ ತರಬೇಡಿ; ನಿಮ್ಮ ಧೂಪವು ನನಗೆ ಅಸಹ್ಯ; ನಿಮ್ಮ ಅಮಾವಾಸ್ಯೆಯನ್ನಾಗಲಿ ಹಬ್ಬವನ್ನಾಗಲಿ ಸಬ್ಬತ್ತನ್ನಾಗಲಿ ನಾನು ಸಹಿಸಲಾರೆ. ನಿಮ್ಮ ಪವಿತ್ರಕೂಟಗಳಲ್ಲಿ ನೀವು ಮಾಡುವ ದುಷ್ಟತನವನ್ನು ನಾನು ಸಹಿಸಲಾರೆ.
“ನೀವು ನನಗೆ ಪ್ರಾರ್ಥಿಸುವಾಗ ನಿಮ್ಮ ಕೈಗಳನ್ನೆತ್ತುವಿರಿ, ಆದರೆ ನಾನು ನಿಮ್ಮ ಕಡೆಗೆ ನೋಡುವುದಿಲ್ಲ. ನೀವು ಹೆಚ್ಚೆಚ್ಚಾಗಿ ಪ್ರಾರ್ಥಿಸುವಿರಿ, ಆದರೂ ನಾನು ನಿಮಗೆ ಕಿವಿಗೊಡುವುದಿಲ್ಲ. ಯಾಕೆಂದರೆ ನಿಮ್ಮ ಕೈಗಳು ರಕ್ತದಿಂದ ತುಂಬಿವೆ.
“ನಿಮ್ಮನ್ನು ಶುದ್ಧಿಮಾಡಿಕೊಳ್ಳಿರಿ; ಶುಚಿಪಡಿಸಿಕೊಳ್ಳಿರಿ. ನಿಮ್ಮ ದುಷ್ಕೃತ್ಯಗಳನ್ನು ತೊಲಗಿಸಿರಿ; ಅವುಗಳನ್ನು ನೋಡಲು ನನಗೆ ಮನಸ್ಸಿಲ್ಲ. ಕೆಟ್ಟದ್ದನ್ನು ಮಾಡದೆ ಒಳ್ಳೆಯದನ್ನೇ ಮಾಡಿರಿ;
ಯೆಹೋವನು ಹೀಗೆನ್ನುತ್ತಾನೆ: “ಬನ್ನಿರಿ, ನಾವು ಚರ್ಚೆ ಮಾಡೋಣ. ನಿಮ್ಮ ಪಾಪಗಳು ಕಡುಕೆಂಪಾಗಿದ್ದರೂ ಅವುಗಳನ್ನು ತೊಳೆದಾಗ ನೀವು ಹಿಮದಂತೆ ಬಿಳುಪಾಗುವಿರಿ. ನಿಮ್ಮ ಪಾಪಗಳು ಕಿರಮಂಜಿಬಣ್ಣವಾಗಿದ್ದರೂ ನೀವು ಉಣ್ಣೆಯಂತೆ ಬೆಳ್ಳಗಾಗುವಿರಿ.
ದೇವರು ಹೇಳುವುದೇನೆಂದರೆ: “ಜೆರುಸಲೇಮಿನ ಕಡೆಗೆ ನೋಡಿರಿ. ಆಕೆ ನನ್ನ ಮೇಲೆ ನಂಬಿಕೆ ಇಟ್ಟು ಹಿಂಬಾಲಿಸಿದಂಥ ನಗರಿಯಾಗಿದ್ದಳು. ಆದರೆ ಈಗ ಆಕೆ ಸೂಳೆಯಾಗಲು ಕಾರಣವೇನು? ಈಗ ಆಕೆ ನನ್ನನ್ನು ಹಿಂಬಾಲಿಸುತ್ತಿಲ್ಲ. ಜೆರುಸಲೇಮು ನ್ಯಾಯನೀತಿಗಳಿಂದ ತುಂಬಿರಬೇಕಿತ್ತು. ಅಲ್ಲಿ ವಾಸಿಸುವ ಜನರು ದೇವರ ಇಚ್ಛೆಯಂತೆ ನಡೆಯಬೇಕಿತ್ತು. ಆದರೆ ಈಗ ಕೊಲೆಗಡುಕರು ಅಲ್ಲಿ ವಾಸಿಸುತ್ತಿದ್ದಾರೆ.
ಇವೆಲ್ಲವುಗಳ ಕುರಿತಾಗಿ ಒಡೆಯನೂ ಇಸ್ರೇಲಿನ ಸರ್ವಶಕ್ತನೂ ಆಗಿರುವ ಯೆಹೋವನು ಹೇಳುವುದೇನೆಂದರೆ: “ನನ್ನ ಶತ್ರುಗಳೇ, ನಾನು ನಿಮ್ಮನ್ನು ಶಿಕ್ಷಿಸುವೆನು. ಇನ್ನು ಮುಂದೆ ನೀವು ನನಗೆ ಯಾವ ಕೇಡನ್ನೂ ಮಾಡುವುದಿಲ್ಲ.
ಜನರು ಬೆಳ್ಳಿಯನ್ನು ಶುದ್ಧಮಾಡುವದಕ್ಕೆ ದ್ರವವನ್ನು [*ದ್ರವ ತೊಳೆಯಲು ಉಪಯೋಗಿಸುವ ಉಪ್ಪು ಮಿಶ್ರಿತವಾದ ದ್ರವ.] ಉಪಯೋಗಿಸುವರು. ಅದೇರೀತಿಯಲ್ಲಿ ನಿಮ್ಮ ತಪ್ಪುಗಳನ್ನೆಲ್ಲ ನಾನು ಶುದ್ಧಮಾಡುವೆನು. ನಿಮ್ಮಲ್ಲಿರುವ ಎಲ್ಲಾ ಅಯೋಗ್ಯವಾದವುಗಳನ್ನು ತೆಗೆದುಬಿಡುವೆನು.
ಆರಂಭದಲ್ಲಿ ನಿಮಗಿದ್ದಂತಹ ನ್ಯಾಯಾಧೀಶರನ್ನು ನಾನು ತಿರುಗಿ ಬರಮಾಡುವೆನು. ನಿಮ್ಮ ಸಲಹೆಗಾರರು ಹಿಂದಿನ ಕಾಲದ ಸಲಹೆಗಾರರಂತೆ ಇರುವರು. ಆಗ ನೀನು ‘ನ್ಯಾಯವಾದ ಮತ್ತು ನಂಬಿಗಸ್ತಿಕೆಯುಳ್ಳ ಪಟ್ಟಣ’ವೆಂದು ಕರೆಯಲ್ಪಡುವೆ.”
ಬಲಿಷ್ಠರು ಸಣ್ಣಗಿರುವ ಒಣಮರದ ತುಂಡಿನಂತಿರುವರು. ಆ ಜನರು ಮಾಡುವ ಕಾರ್ಯಗಳು ಬೆಂಕಿಯನ್ನು ಪ್ರಾರಂಭಿಸುವ ಕಿಡಿಯಂತಿರುವವು. ಅವರ ಕಾರ್ಯಗಳೆಲ್ಲಾ ಸುಟ್ಟುಹೋಗುವವು; ಆ ಬೆಂಕಿಯನ್ನು ಯಾರೂ ನಿಲ್ಲಿಸಲಾರರು.